ರಾಯಗರ್  		
ಭಾರತದ ಮಧ್ಯಪ್ರದೇಶದ ರಾಜ್ಯದ ಒಂದು ಜಿಲ್ಲೆ ಹಾಗೂ ಜಿಲ್ಲಾ ಆಡಳಿತ ಕೇಂದ್ರ. ಹಿಂದಿನ ಸಂಸ್ಥಾನಗಳಾದ  ಜಸ್‍ಪುರ್, ಸಾರಂಗರ್, ರಾಯ್‍ಗರ್ ಮತ್ತು ಉದಯ್‍ಪುರ್ ಇವುಗಳನ್ನು 1948ರಲ್ಲಿ ಒಗ್ಗೂಡಿಸಿ ರಾಯಗರ್ ಜಿಲ್ಲೆಯನ್ನು ರಚಿಸಲಾಯಿತು. ಮಧ್ಯಪ್ರದೇಶದ ಪೂರ್ವದ ಅಂಚಿನಲ್ಲಿರುವ ಈ ಜಿಲ್ಲೆಯ ಉತ್ತರಕ್ಕೆ  ಬಿಹಾರ್, ದಕ್ಷಿಣಕ್ಕೆ ಒರಿಸ್ಸ ರಾಜ್ಯಗಳಿವೆ. ಈ ಜಿಲ್ಲೆಯ ವಿಸ್ತೀರ್ಣ 12,924 ಚಕಿಮೀ. ಜನಸಂಖ್ಯೆ 1724420 (1991).

ರಾಯ್‍ಗರ್ ಜಿಲ್ಲೆಯ ಮಧ್ಯದಲ್ಲಿ ಪೂರ್ವ ಪಶ್ಚಿಮವಾಗಿ ಚವರ್ದಲ್ ಬೆಟ್ಟ ಶ್ರೇಣಿ ಹಬ್ಬಿದ್ದು ಜಿಲ್ಲೆಯನ್ನು ಪ್ರಾಕೃತಿಕವಾಗಿ ಎರಡಾಗಿ ವಿಭಾಗಿಸಿದೆ ಉತ್ತರದಲ್ಲಿ ಬೆಟ್ಟಗುಡ್ಡಗಳಾದರೆಮ, ಜಿಲ್ಲೆಯ ದಕ್ಷಿಣಭಾಗ ಮೈದಾನ ಪ್ರದೇಶ, ಮಾಂಡ್ ಮತ್ತು ಕೆಲೊ ಈ ಜಿಲ್ಲೆಯ ನದಿಗಳು. ಬತ್ತ, ಎಣ್ಣೆಬೀಜಗಳು ಮತ್ತು ವಿವಿಧ ದ್ವಿದಳಧಾನ್ಯಗಳು ಇಲ್ಲಿನ ಮುಖ್ಯ ಬೆಳೆಗಳು. ಅರಣ್ಯೋದ್ಯೋಗಗಳು ಮತ್ತು ಜೇನುಸಾಕಣೆಯಿದೆ. ಕೈಗಾರಿಕೆಗಳಿಗೆ ಉಪಯುಕ್ತವಾಗುವ ಇದ್ದಿಲು, ಸುಣ್ಣಕಲ್ಲು, ಕಬ್ಬಿಣದ ಅದಿರು ಮತ್ತು ಬಾಕ್ಸೈಟ್ ಗಣಿಗಳಿವೆ.
ರಾಯ್‍ಗರ್  ಪಟ್ಟಣ ಜಿಲ್ಲೆಯ ಆಡಳಿತಕೇಂದ್ರವಾಗಿದ್ದು ಮಹಾನದಿಯ ಉಪನದಿಯಾದ ಕೆಲೊನದಿಯ ಪಶ್ಚಿಮ ದಂಡೆಯಲ್ಲಿದೆ. ಆಸ್ಪತ್ರೆಗಳು, ಶಾಲಾ ಕಾಲೇಜುಗಳಿವೆ. ಕೈಮಗ್ಗಗಳಿದ್ದು ಬಟ್ಟೆತಯಾರಿಕೆ ಜೊತೆಗೆ ಸೆಣಬಿನ ಉತ್ಪನ್ನಗಳ ತಯಾರಿಕಾ ಕೈಗಾರಿಕೆಗಳಿವೆ. ಇಲ್ಲಿ ಬಳೆಗಳು ಮತ್ತು ವಿವಿಧ ಗಾಜಿನ ವಸ್ತುಗಳ ತಯಾರಿಕೆಯುಂಟು. ಇದೊಂದು ಮುಖ್ಯ ರೈಲು ನಿಲ್ದಾಣವಾಗಿದ್ದು ವ್ಯಾಪಾರ ವಾಣಿಜ್ಯದ ಅಭಿವೃದ್ಧಿಗೆ ಪೂರಕವಾಗಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ